Suresha B

Suresha B

Actor, Director, Producer and Script writer

Bio

ಬಿ.ಸುರೇಶ ಪರಿಚಯ
೧೯೬೨ರಲ್ಲಿ ದಾವಣಗೆರೆಯಲ್ಲಿ ಜನಿಸಿದ ಬಿ.ಸುರೇಶ ಓದಿದ್ದು ಕುಂಭಶಾಸ್ತ್ರ (Diploma and Engineering in Ceramic Technology) ನಂತರ ಮೈಸೂರು ಮುಕ್ತ ವಿವಿಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ.
೧೯೭೨ರಿಂದಲೇ ಬಾಲನಟನಾಗಿ ಹವ್ಯಾಸೀ ರಂಗಭೂಮಿಯಲ್ಲಿ ಕಾಣಿಸಿಕೊಂಡ ಇವರು ಈವರೆವಿಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಹದಿನೆಂಟು ನಾಟಕಗಳನ್ನು ಈವರೆಗೆ ಬರೆದಿದ್ದಾರೆ. ಷೇಕ್ಸ್ಪಿಯರ್ ಅವರ ಮ್ಯಾಕ್ಬೆತ್, ಕಿಂಗ್ ಲಿಯರ್ ನಂತಹ ನಾಟಕಗಳನ್ನೂ ಒಳಗೊಂಡಂತೆ ೩೦ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಒಂಬತ್ತು ನಾಟಕಗಳು ಮುದ್ರಣವಾಗಿವೆ. ಬಿ.ಸುರೇಶ ಅವರು ಬರೆದ *ಷಾಪುರದ ಸೀನಿಂಗಿ-ಸತ್ಯ’ ನಾಟಕವು ೧೯೯೭ರಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. 2012ರಲ್ಲಿ “ಒಂಬತ್ತು ನಾಟಕಗಳು” ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ದೊರೆತಿದೆ.
೧೯೭೬ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ `ಘಟಶ್ರಾದ್ಧ’ ಚಿತ್ರದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಲನಚಿತ್ರ ಯಾತ್ರೆ ಆರಂಭ. ೧೯೮೮ರಲ್ಲಿ `ಮಿಥಿಲೆಯ ಸೀತೆಯರು’ [ನಿ: ಕೆ.ಎಸ್.ಎಲ್. ಸ್ವಾಮಿ (ರವೀ)] ಮೂಲಕ ಸ್ವತಂತ್ರ ಚಿತ್ರಕಥೆ/ ಸಂಭಾಷಣೆ ಲೇಖಕರಾದ ಬಿ. ಸುರೇಶ ಅಲ್ಲಿಂದಾಚೆಗೆ ೨೫ಕ್ಕೂ ಹೆಚ್ಚು ಚಿತ್ರಗಳಿಗೆ ಲೇಖಕರಾಗಿ ದುಡಿದಿದ್ದಾರೆ.
೧೯೯೨ರಿಂದ ಹಿರಿತೆರೆಯಲ್ಲದೆ ಕಿರುತೆರೆಗೂ ದುಡಿಯಲಾರಂಭಿಸಿದ ಬಿ.ಸುರೇಶ ಅವರ ದೈನಿಕ ಧಾರಾವಾಹಿ `ಸಾಧನೆ’ ಬೆಂಗಳೂರು ದೂರದರ್ಶನ ಕೇಂದ್ರದಿಂದ ಬಿತ್ತರವಾದ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ೨೦೦೧ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಹೀಗೆ ಹಲವು ಪ್ರಶಸ್ತಿಗಳನ್ನು `ಸಾಧನೆ’ ಧಾರವಾಹಿಯು ಪಡೆದುಕೊಂಡಿತ್ತು.
ಈ ವರೆಗೆ (೨೦೧೬) ಐದು ಚಿತ್ರ ನಿರ್ದೇಶಿಸಿದ್ದಾರೆ. ನಾಲ್ಕು ಸಿನಿಮಾಗಳಿಗೆ ನಿರ್ಮಾಪಕರಾಗಿ, ಹಲವು ಹೊಸಬರಿಗೆ ನಿರ್ದೇಶನದ ಅವಕಾಶ ನೀಡಿದ್ದಾರೆ.
‘ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ ೨೦೦೨-೦೩ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿದೊರೆತಿದೆ. ೨೦೧೦ರಲ್ಲಿ ‘ಪುಟ್ಟಕ್ಕನ ಹೈವೇ’ ಚಿತ್ರಕ್ಕೆಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂಬ (ರಜತ ಕಮಲ) ಪ್ರಶಸ್ತಿಯು ೫೮ನೇ ರಾಷ್ಟ್ರೀಯ ಪ್ರಶಸ್ತಿಯ ಸಾಲಿನಲ್ಲಿ ದೊರೆತಿದೆ. ಇದೇ ಚಿತ್ರಕ್ಕೆ 2012ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯತ್ತಮ ಕನ್ನಡ ಚಿತ್ರ ಪ್ರಶಸ್ತಿಯು ದೊರೆತಿದೆ. ಇವರು ನಿರ್ಮಿಸಿದ“ಗುಬ್ಬಚ್ಚಿಗಳು” ಚಿತ್ರಕ್ಕೆ ೨೦೦೭ರ ಅತ್ಯುತ್ತಮ ಮಕ್ಕಳ ಚಿತ್ರ (ಸ್ವರ್ಣ ಕಮಲ) ಪ್ರಶಸ್ತಿ ದೊರಕಿದೆ.“ಉಪ್ಪಿನ ಕಾಗದ” ಚಿತ್ರಕ್ಕೆ 2017ರ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ನೆಟ್‍ಪ್ಯಾಕ್ ಅಂತಾರಾಷ್ಟ್ರೀಯ ಜ್ಯೂರಿಯ ಪ್ರಶಸ್ತಿ ದೊರೆತಿದೆ.
೨೦೦೪ರಿಂದ ೨೦೦೯ರ ವರೆಗೆ ಇವರು ಬರೆದು ನಿರ್ದೇಶಿದ `ನಾಕುತಂತಿ’ ಧಾರಾವಾಹಿ ಉದಯ ವಾಹಿನಿಯಲ್ಲಿ ೧೪೦೦ ಕಂತುಗಳಷ್ಟು ಪ್ರಸಾರವಾಗಿದೆ. ಇದೇ ಉದಯ ವಾಹಿನಿಗಾಗಿ ಬಿ.ಸುರೇಶ ಅವರ ಸಾರಥ್ಯದಲ್ಲಿ ಪ್ರಸಾರವಾದ ಮತ್ತೊಂದು ಧಾರಾವಾಹಿ `ತಕಧಿಮಿತಾ’ ಸಹ ೮೯೧ ಕಂತುಗಳಿಗೆ (ಮಾರ್ಚ್‌ ೨೬, ೨೦೦೯) ಮುಕ್ತಾಯ ಕಂಡಿದೆ.
೨೦೧೦ ರಿಂದ ೨೦೧೬ರ ವರೆಗೆ ಉದಯ ವಾಹಿನಿಯಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ‘ಪ್ರೀತಿ-ಪ್ರೇಮ’ ಎಂಬ ಹೆಸರಿನಲ್ಲಿ ಟೆಲಿಫಿಲ್ಮ್‌ಗಳು ಪ್ರಸಾರವಾಗಿವೆ. ಇದು ಬಿ.ಸುರೇಶ ಅವರ ಸಾರಥ್ಯದಲ್ಲಿ ಬರುತ್ತಿದ್ದ ಕಾರ್ಯಕ್ರಮ. ಈ ವರೆಗೆ ೩೦ಕ್ಕೂ ಹೆಚ್ಚು ಹೊಸ ನಿರ್ದೇಶಕರಿಗೆ ಈ ಟೆಲಿಫಿಲ್ಮ್‌ಗಳು ವೇದಿಕೆಯಾಗಿದೆ. ೨೫ಕ್ಕೂ ಹೆಚ್ಚು ಹೊಸ ಲೇಖಕರು ಪರಿಚಿತರಾಗಿದ್ದಾರೆ.
೨೦೧೨ರ ಜೂನ್ ತಿಂಗಳಿಂದ 2014ರ ನವೆಂಬರ್ ವರೆಗೆ ಉದಯ ವಾಹಿನಿಯಲ್ಲಿ ಸಂಜೆ ೭ಗಂಟೆಗೆ “ಅಳಗುಳಿಮನೆ” ಎಂಬ ದೈನಿಕ ಧಾರಾವಾಹಿಯು ಯಶಸ್ವಿಯಾಗಿ (೬೫೪ ಕಂತುಗಳು) ಪ್ರಸಾರವಾಗಿದೆ. ೨೦೧೨ರಿಂದ ೨೦೧೫ರವರೆಗೆ “ಮದರಂಗಿ” ಎಂಬ ದೈನಿಕ ಧಾರಾವಾಹಿಯು (೬೫೦ ಕಂತುಗಳು) ಉದಯ ವಾಹಿನಿಯಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗಿ ಅತ್ಯಂತ ಜನಪ್ರಿಯ ಧಾರಾವಾಹಿ ಎನಿಸಿಕೊಂಡಿದೆ. ೨೦೧೩ರಿಂದ ೨೦೧೫ರ ವರೆಗೆ “ಕಾದಂಬರಿ ಕಣಜ”ಎಂಬ ಕನ್ನಡ ಸಾಹಿತ್ಯ ಕೃತಿಯನ್ನು ಆಧರಿಸಿದ ‍ ಧಾರಾವಾಹಿಯು ಉದಯ ವಾಹಿನಿಯಲ್ಲಿ ರಾತ್ರಿ 8.30ಕ್ಕೆ (೫೫೦ ಕಂತುಗಳು) ಪ್ರಸಾರವಾಗಿದೆ. ೨೦೧೬ರಿಂದ ಪಿ.ಶೇಷಾದ್ರಿ ನಿರ್ದೇಶನದಲ್ಲಿ “ಸಾಕ್ಷಿ” (೪೫೦ ಕಂತುಗಳು) , ಸಯ್ಯದ್ ಅಶ್ರಫ್ ನಿರ್ದೇಶನದಲ್ಲಿ “ಫ್ಯಾಮಿಲಿ ನಂಬರ್ ೧” (೯೦೦ ಕಂತುಗಳು, ಭಾರತೀಶ್ ನಿರ್ದೇಶನದಲ್ಲಿ “ಸರಿಗಮಪದ ನೀ” (೫೫೦ ಕಂತುಗಳು) ಧಾರಾವಾಹಿಗಳು ಉದಯ ವಾಹಿನಿಯಲ್ಲಿ ೨೦೧೬ರಿಂದ ೨೦೧೭ರ ಅವಧಿಯಲ್ಲಿ ಪ್ರಸಾರವಾಗಿದೆ. ಸರಸ್ವತಿ ನಟರಾಜ್ ಅವರ ಕಾದಂಬರಿ ಆಧರಿಸಿದ “ಜೀವನದಿ”ಧಾರಾವಾಹಿಯು ೨೦೧೮ರ ಮಾರ್ಚ್ ತಿಂಗಳಿಂದ ಸಯ್ಯದ್ ಅಶ್ರಫ್ ನಿರ್ದೇಶನದಲ್ಲಿ ಪ್ರಸಾರವಾಗಿ ೪೦೦ ಕಂತುಗಳ ಹಂತ ಮುಟ್ಟಿದೆ. ಇದೇ ಉದಯ ವಾಹಿನಿಯಲ್ಲಿ “ಸ್ಟಾರ್ ಪಾಕ”, “ನಮ್ಮೂರ ಪಾಕ”, “ದಿವ್ಯದೇಗುಲ”, “ಹೊಸಬೆಳಕು” ಎಂಬ ರಿಯಾಲಿಟಿ ಷೋಗಳು (ಪ್ರತಿಯೊಂದೂ ಸಾವಿರ ಕಂತುಗಳ ಸರಾಸರಿಯಲ್ಲಿ) ೨೦೧೨ರಿಂದ ೨೦೧೫ರ ಪ್ರಸಾರವಾಗಿದೆ.
ಬಿ.ಸುರೇಶ ಅವರು ಶೈಲಜಾನಾಗ್ ಅವರೊಡನೆ ನಿರ್ಮಿಸಿದ ಪ್ರಕಾಶ್ ರೈ ನಿರ್ದೇಶನದ “ನಾನು ನನ್ನ ಕನಸು” ಚಿತ್ರವು 2010ರಲ್ಲಿ, ಅಭಯಸಿಂಹ ನಿರ್ದೇಶನದ “ಸಕ್ಕರೆ” ೨೦೧೩ರಲ್ಲಿ ಬಿಡುಗಡೆ ಆಗಿದೆ. “ದೇವರ ನಾಡಲ್ಲಿ” (೨೦೧೫) ಸಿನಿಮಾ ಬಿ.ಸುರೇಶ ನಿರ್ದೇಶನದಲ್ಲಿ ತಯಾರಾಗಿ ಬಿಡುಗಡೆಯಾಗಿ, ಹಲವು ಅಂತಾರಾಷ್ಟ್ರೀಯ ಉತ್ಸವಗಳಲ್ಲಿ ಭಾಗವಹಿಸಿದೆ. ಬಿ.ಸುರೇಶ ರಚಿಸಿ, ನಿರ್ದೇಶಿಸಿದ (2016) “ಉಪ್ಪಿನ ಕಾಗದ” ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಅಲ್ಲದೆ, ಕೋಲ್ಕತ್ತ, ಪುಣೆ, ಭೋಪಾಲ್, ಡಲ್ಲಾಸ್, ಡಾಕಾ, ಮಿಲಾನ್, ಟೋಕಿಯೋ ಹೀಗೆ ಹಲವು ನಗರಗಳಲ್ಲಿ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದೆ. ಈ ಸಿನಿಮಾಕ್ಕೆ ನೆಟಪಾಕ್ ಜ್ಯೂರಿ ಪ್ರಶಸ್ತಿ, ರಾಜ್ಯಸರ್ಕಾರದ ಅತ್ಯುತ್ತಮ ಕಲಾನಿರ್ದೇಶನ ಪ್ರಶಸ್ತಿ ಸಹ ದೊರೆತಿದೆ.
ಬಿ.ಸುರೇಶ ಅವರು ಬರೆದಿರುವ ದೃಶ್ಯಮಾಧ್ಯಮ ಕುರಿತ ಲೇಖನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಲೇಖನಗಳ ಸಂಗ್ರಹ “ಬೆಳ್ಳಿಅಂಕ” ಎಂಬ ಶೀರ್ಷಿಕೆಯಲ್ಲಿ ಪ್ರಕಟವಾಗಿದೆ. ಇದಲ್ಲದೆ `ನಾಕುತಂತಿ ಪ್ರಕಾಶನ’ ಎಂಬ ಹೆಸರಿನ ಸಂಸ್ಥೆಯನ್ನು ನಡೆಸುತ್ತಾ ಇರುವ ಬಿ.ಸುರೇಶ ಅವರು ಇದೇ ಸಂಸ್ಥೆಯಡಿಯಲ್ಲಿ ಮಾಧ್ಯಮದಲ್ಲಿ ದುಡಿಯುತ್ತಿರುವವರ ಬರಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ.
ಸದಭಿರುಚಿಯ ಚಿತ್ರ ಚಳುವಳಿಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಅನೇಕ ಊರುಗಳಲ್ಲಿ ಚಲನಚಿತ್ರ ವೀಕ್ಷಕರ ಕ್ಲಬ್ಗಳನ್ನು ಆರಂಭಿಸಿರುವ ಬಿ.ಸುರೇಶ ಅವರಿಂದಾಗಿ ಗುಲ್ಬರ್ಗಾ, ಮೈಸೂರು, ಮಂಡ್ಯ, ಶಿವಮೊಗ್ಗಾದಲ್ಲಿ ಚಲನಚಿತ್ರ ಕ್ಲಬ್ಗಳು ಆರಂಭವಾಗಿವೆ.
ಮೀಡಿಯಾ ಹೌಸ್ ಸ್ಟುಡಿಯೋದ ಮೂಲಕ ಹೊಸಬರಿಗೆ ಚಲನಚಿತ್ರ ತಯಾರಿಸುವ ಕಾರ್ಯವನ್ನು ಕೈಗೆತ್ತಿಕೊಂಡಿರುವ ಬಿ.ಸುರೇಶ, ಆ ಸಂಸ್ಥೆಯಿಂದ ನಿರ್ಮಿಸಿದ ಪ್ರಥಮಚಿತ್ರ `ಗುಬ್ಬಚ್ಚಿಗಳು’ ಮೂಲಕ ಅಭಯಸಿಂಹ ಅವರು ನಿರ್ದೇಶಕರಾಗಿದ್ದಾರೆ. ಈ ಚಿತ್ರವು ಅದಾಗಲೇ ಲಾಸ್ಎಂಜಲೀಸ್, ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲದೆ, ಭಾರತೀಯ ಚಿತ್ರೋತ್ಸವದ ಪನೋರಮಾ ವಿಭಾಗ ಮತ್ತು ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪಾಲ್ಗೊಂಡಿದೆ. ಪ್ರಕಾಶ್ ರೈ ಅವರ ನಿರ್ದೇಶನದಲ್ಲಿ ‘ನಾನು ನನ್ನ ಕನಸು’ ಎಂಬ ಚಿತ್ರವನ್ನು ಪಾಲುದಾರರಾಗಿ ನಿರ್ಮಿಸಿದ್ದಾರೆ. ಶೈಲಜಾನಾಗ್ ಮತ್ತು ಸುರೇಶ ಪಾಲುದಾರರಾಗಿ “ಸಕ್ಕರೆ” ಸಿನಿಮಾ ಬಿಡುಗಡೆಯಾಗಿದೆ. ಇದೀಗ ದರ್ಶನ್ ಅಭಿನಯದ “ಯಜಮಾನ” ೨೦೧೯ರ ಮಾರ್ಚ್ ೧ರಂದು ಬಿಡುಗಡೆಯಾಗಿ ಶತದಿನೋತ್ಸವ ಸಂಭ್ರಮ ಕಂಡಿದೆ.
ಈಚೆಗೆ ಮರಳಿ ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಆರಂಭಿಸಿರುವ ಬಿ.ಸುರೇಶ ಈಚೆಗೆ ಅಭಿನಯಿಸಿದ ‘ಸ್ಲಂಬಾಲ’ ಚಿತ್ರದ ನಟನೆಯಿಂದಾಗಿ ಹೆಸರು ಮಾಡಿದ್ದಾರೆ. ಅದರೊಂದಿಗೆ ‘ಜುಗಾರಿ’, ‘ಕಳ್ಳರಸಂತೆ’, ‘ಪರೋಲ್’, ‘ಜಟ್ಟಾ’, ‘ಉಳಿದವರು ಕಂಡಂತೆ’, ‘ಕ್ರಾಂತಿ’, ‘ಮೃಗಶಿರ’, `ಬೆಂಕಿಪಟ್ಟಣ’, “ಕಾಡು ಹಕ್ಕಿಯ ಹಾಡು’, `ಭ್ರಷ್ಟಾಚಾರ’, “ವಿಘ್ನೇಶ್ವರ”, “ದೊಡ್ಮನೆ ಹುಡುಗ”, “ಕೆಜಿಎಫ್”, “ಅನಂತು ವರ್ಸಸ್ ನುಸ್ರತ್”, “ಮನೋಮದ”, “ಇಮೈಕ್ಕನ್ ನುಡಿಗಳ್” (ತಮಿಳು), ಮುಂತಾದ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿಯಿಸಿದ್ದಾರೆ.
ಬಿ.ಸುರೇಶ ಅವರು ಅಭಿನಯಿಸಿದ (ಎಸ್.ಸುರೇಂದ್ರನಾಥ್ ನಿರ್ದೇಶಿಸಿದ) ‘ನಾ ತುಕಾರಾಂ ಅಲ್ಲ’ ನಾಟಕದಲ್ಲಿನ ಅಭಿನಯವನ್ನು ಹಲವರು ಮೆಚ್ಚಿಕೊಂಡಿದ್ದಾರೆ. ಬಿ.ಸುರೇಶ ಅವರು ಬರೆದ ‘ಗಿರಿಜಾ ಕಲ್ಯಾಣ’ ನಾಟಕವು ಸ್ಪಂದನ ತಂಡ ಮೂಲಕ ಬಿ.ಜಯಶ್ರೀ ಅವರ ನಿರ‍್ದೇಶನದಲ್ಲಿ ದೇಶದಾದ್ಯಂತ ಪ್ರದರ್ಶನ ಕಾಣುತ್ತಿದೆ. ಈ ನಾಟಕವು ಹಿಂದಿ, ಮರಾಠಿ ಹಾಗೂ ಉರ್ದು ಭಾಷೆಗಳಿಗೆ ಅನುವಾದವಾಗಿ ಪ್ರದರ್ಶನ ಕಂಡಿದೆ. ಎಂ.ಎಸ್. ಸತ್ಯು ಅವರ ನಿರ‍್ದೇಶನದಲ್ಲಿ, ಇಪ್ಟಾ ಮುಂಬೈ ಮೂಲಕ ಪ್ರದರ್ಶನಗಳನ್ನು ಕಾಣುತ್ತಿದೆ.
೨೦೦೮ರ ಡಿಸೆಂಬರ್‍ ತಿಂಗಳಿನಿಂದ 2014ರ ಮಾರ್ಚ್ ವರೆಗೆ ಕರ್ನಾಟಕ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸದಸ್ಯರಾಗಿದ್ದಾರು. ೨೦೧೦ರಿಂದ ಸುಚಿತ್ರಾ ಫಿಲಂ ಸೊಸೈಟಿಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರು. ೨೦೧೪-೨೦೧೬ ಅವಧಿಗೆ ಸುಚಿತ್ರಾ ಫಿಲಂ ಸೊಸೈಟಿಯ ಉಪಾಧ್ಯಕ್ಷ ಆಗಿದ್ದರು. ೨೦೧೧ರ ಅಕ್ಟೋಬರ್‌ನಿಂದ ೨೦೧೪ರವರೆಗೆ ಸುಚಿತ್ರ ಫಿಲಂ ಅಂಡ್ ಕಲ್ಚರಲ್ ಅಕಾಡಮಿಯ ಟ್ರಸ್ಟಿಗಳಲ್ಲಿ ಒಬ್ಬರಾಗಿದ್ದಾರು. ರಂಗಶಂಕರದ ಟ್ರಸ್ಟಿಗಳಲ್ಲಿ ಒಬ್ಬರಾಗಿ 2014ರ ಅಕ್ಟೋಬರ್‍ನಿಂದ ಕೆಲಸ ಮಾಡುತ್ತಾ ಇದ್ದಾರೆ. “ನಟನಾ, ಮೈಸೂರು” ರಂಗಸಂಸ್ಥೆಯ ಟ್ರಸ್ಟಿಯಾಗಿ ೨೦೧೩ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
ಈಗಲೂ ರಂಗಭೂಮಿ, ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಬಿ.ಸುರೇಶ ಸಕ್ರಿಯವಾಗಿ ದುಡಿಯುತ್ತಿದ್ದಾರೆ.